ಸಿರಿಗೆರೆಯ ನೀರಲ್ಲಿ ,
ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು.
ಗುಡಿಯ ಗೋಪುರದಲ್ಲಿ,
ನೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು.
ನಿನ್ನಾ ಹೆಸರು...
ಜೋಯಿಸರ ಹೊಲದೊಳಗೆ,
ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು.
ತಾಯ ಮೊಲೆಯಲ್ಲಿ ಕರು,
ತುಟಿ ಇಟ್ಟು ಚೆಲ್ಲಿಸಿದ
ಹಾಲಲ್ಲಿ ನಿನ್ನ ಹೆಸರು.
ನಿನ್ನಾ ಹೆಸರು...
ಹೂ ಬನದ ಬಿಸಿಲಲ್ಲಿ,
ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು.
ಹೊಂಬಾಳೆ ಹೂವಿನಲಿ
ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು.
ಮರೆತಾಗ ತುಟಿಗೆ ಬಾರದೆ,
ಮೋಡ ಮರೆಯೊಳಗೆ ಬೆಳದಿಂಗಳೋ
ನಿನ್ನ ಹೆಸರು
.
ನೆನೆದಾಗ ಕಣ್ಣ ಮುಂದೆಲ್ಲ
ಹುಣ್ಣಿಮೆಯೊಳಗೆ ಹೂಬಾಣ,
ನಿನ್ನ ಹೆಸರು.
ನಿನ್ನಾ ಹೆಸರು...
ನಿನ್ನಾ ಹೆಸರು...
-ಕೆ
ಎಸ್ ನರಸಿಂಹಸ್ವಾಮಿ
No comments:
Post a Comment