Wednesday, January 15, 2014

ಕಾಡು ಕುದುರೆ.....

ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ


ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ

ಕಾಡಿನಿಂದ ಚಂಗನೆ ನೆಗೆದಿತ್ತ
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ 

ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ 
ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
          -ಡಾ. ಚಂದ್ರಶೇಖರ ಕಂಬಾರ 

Tuesday, January 14, 2014

ಗಮ ಗಮಾ ಗಮಾಡಸತಾವ ಮಲ್ಲಿಗಿ

ಗಮ ಗಮಾ ಗಮಾಡಸತಾವ
ಮಲ್ಲಿಗಿ
ನೀ ಹೊರಟಿದ್ದೀಗ ಎಲ್ಲಿಗಿ..?
ತುಳಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡಕಿ
ಕನಸು ತೇಲಿ ಬರತಾವ ಹುಡುಕಿ!!
ನೀ ಹೊರಟಿದ್ದೀಗ ಎಲ್ಲಿಗಿ..?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನ ಸೋತು ಆಯಿತ ಮರುಳ!!

ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ್ನ ಕಂಡರ ಕವದಾವ ಜೊoಪ!!

ನೆರಳಲ್ಲಾ ಡತಾವ ಮರದ ಬುಡುಕ
ಕೆರಿ ತೆರಿ ನೂಗತಾವ ದಡಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ!!
ನೀ ಹೊರಟಿದ್ದೀಗ ಎಲ್ಲಿಗಿ..?

                   - ಅಂಬಿಕಾತನಯದತ್ತ 

Monday, November 4, 2013

ಆಯ್ದ ಕವಿತೆಗಳು-೦೨


ಕೊನೇ.. ಪಿರಿಯಡ್ಡಿನ ಹುಡುಗಿಯರ ಗಜಲ್ ಗಳು 
  - ಪ್ರೊ. ಟಿ. ಯಲ್ಲಪ್ಪ

 
ಕಾಲೇಜು ಹುಡುಗರಿಗೆ
ಪ್ರತಿ ದಿನದ ಆ ಕೊನೇ
ಪಿರಿಯಡ್ ಮುಗಿಯುವುದರಲ್ಲೇ
ಆಟದ ಮೈದಾನಕ್ಕಿಳಿಯುವ ಸಂಭ್ರಮ!

ಆದರೆ,
ಆ ಹುಡುಗಿಯರಿಗೆ
ದಿನದ ಪ್ರತೀ ಪಿರಿಯಡ್ಡಿನ ಕೊನೆಗೆ
ಉಸಿರು ಬಿಗಿ ಹಿಡಿದು
ಅಷ್ಟೂ ಮೈಯನ್ನು
ಮುಷ್ಟಿ ಮಾಡಿಕೊಂಡು
ಕೂರುವ ಪಿರಿಯಡ್ಡಿನದೇ ವಿಭ್ರಮ!

ಹ್ಯಾಟು, ಬೂಟು, ಬ್ಯಾಟು
ಪ್ಯಾಡುಗಳ ಕಟ್ಟಿಕೊಂಡು
ಮೈದಾನಕ್ಕಿಳಿದು,-ಮೈಬೆವರಿಳಿಸಿಕೊಂಡು
ಆಟವಾಡುವ ಲಗುಬಗೆಯ ಹುಡುಗರು
ಆಕಾಶಕ್ಕೆ ಹಾರಲು ಬಿಟ್ಟ ಹಕ್ಕಿಗಳಂತೆ!
ಒಂದೊಂದಕ್ಕು ಸಂತಸದ ಕುಕಿಲು.



ಸೇಫ಼್ಟಿ ಪ್ಯಾಡಿರಲಿ
ಅಂದು, ಸೇಫ಼್ಟಿಯೇ ಇರದ
ಬಸ್ಸೋ, ಆಟೋವನ್ನು ಹತ್ತಿ
ಸೆಪ್ಟಿಕಾದ ಗಾಯದಂತೆ
ಹುಣ್ಣಾದ ಮನಸಿನಲ್ಲಿ
ಮತ್ತೊಮ್ಮೆ ಹೆಣ್ಣಾದ ತಪ್ಪಿಗೆ ಶಪಿಸುತ್ತ
ಆ ಹಲಾಲುಕೋರ ಕಣ್ಣ
ಸ್ಕ್ಯಾನಿಂಗುಗಳಲ್ಲಿ ಬೆತ್ತಲಾಗಿ
ಮನೆಯ ಬಚ್ಚಲಿಗೆ ಸೇರಿದರದೇ ಸ್ವರ್ಗ !

ನೀರ ದೀವಿಗೆ ಇಟ್ಟು
ನೀರ ದೇವಿಗೆ ನಮಿಸಿ
ಮೈಲಿಗೆಯ ಮೈಯ
ತೊಳೆದುಕೊಂಡರೆ ಸಾಕು
ನೀರೆಯರೇ ನೀರಿಗಿಂತ ಮಿಗಿಲು !

ಆ ಹುಡುಗರ
ಬಿಸಿ ಅಪ್ಪುಗೆಗೆ
ಸವಿ ಮುತ್ತಿಗೇ
ಮುಟ್ಟು ನಿಂತಿತೇನೋ
ಎಂಬ ಭಯದ ಕಾರ್ಮುಗಿಲು
ಕರಗಿದಂತೆ ಅಬ್ಬ!
ಭ್ರಮೆಗಳೆಲ್ಲಾ ಸೋರಿ
ಹಗುರಗೊಳ್ಳುವುದು ಮನ ಬೆಳ್ಮುಗಿಲಿನಂತೆ!



ಅಮಾಯಕ ಹುಡುಗಿಯರ
ಹುಡುಗರ ಆ ಮಾಯಕ
ನಗೆಗೆ ಮರುಳಾಗಿ
ಪ್ರಾಯದ ಅ ನಡುಗಡ್ಡೆಯ
ಮರಳ ದಡದಲ್ಲೀಗ
ಯಾರ ಯಾರದೋ ಹೆಜ್ಜೆ ಗುರುತುಗಳು
ಕಣ್ಣೀರಿನೊಂದಿಗೆ ಕಲಸಿಕೊಂಡು
ಎದೆ ಬಡಿತದೊಂದಿಗೆ ಶ್ರುತಿಗೊಂಡು
ಬೆವರುತ್ತಾರೆ ಒಂದೇ ಸಮ... ಹೀಗೆ...


ತಮ್ಮ ಮೈದಾನದ ಬಗ್ಗೆ
ಮೈದಾನಕ್ಕಿಳಿದ ಆ ಹುಡುಗರ
ಎಂದಿಗೂ ಮುಗಿಯದ
ಆಟದ ಸೋಲು-ಗೆಲುವಿನ
ಸಂಭ್ರಮದ ಬಗ್ಗೆ ನೆನೆದು
ನೆನೆ ನೆನೆದು ಹೀಗೆ..
ಪ್ರತಿ ಪಿರಿಯಡ್ಡಿನ
ಕೊನೇ ಕ್ಷಣದವರೆಗೂ..

ಭಯವೋ-ಭ್ರಮೆಯೋ
ಸೋರಿ ಹೋಗುವವರೆಗೂ..
ಭ್ರಾಂತರಾಗಿ ಕೂರುತ್ತಾರೆ
ಆ ಹುಡುಗಿಯರು
ಹೃದಯ ಕೈಲಿಡಿದು!

- ಪ್ರೊ. ಟಿ. ಯಲ್ಲಪ್ಪ


ಈ ಕಾವ್ಯಕ್ಕೆ ಚಿತ್ರ ಕಲಾವಿದರಾರೆಂದು ತಿಳಿಯಲಿಲ್ಲ.. ಅವರ ಕ್ಷಮೆ ಕೋರುತ್ತೇನೆ.