Saturday, April 20, 2013

ದ್ವೀಪ

                                                                   ದ್ವೀಪ

ದೂರ ಕಾಡಲ್ಲೊಂದು ಊರು.  ಸುತ್ತ ಭಗವತಿ ನದಿ ಸುತ್ತುವರೆದರೆ ಎದುರು ಸೀತಾ ಪರ್ವತ ಮತ್ತೆಲ್ಲ ಕಾಡು. ಮಳೆಗಾಲದಲ್ಲಿ ಎಡೆಬಿಡದ ಮಳೆ. ಅಲ್ಲಿರುವಂಥವು ಕೆಲವೇ ಕೆಲವು ಮನೆಗಳು. ಆ ಮನೆಗಳಲ್ಲೊಂದು  ಮನೆ ದುಗ್ಗಜ್ಜನದು. ಮನೆಲಿರೋದು ದುಗ್ಗಜ್ಜ, ಅವನ ಮಗ ಗಣಪಯ್ಯ ಮತ್ತು ಸೊಸೆ ನಾಗಿ. ಮನೆ ನಡೆಯುವುದು ಅಲ್ಪ ಸ್ವಲ್ಪ ಜಮೀನು ಮತ್ತು ಅಲ್ಲಿಯ ದೈವದ ಕಾರಣಿಕೆಯಿಂದ.ಇಡೀ ಸೀಮೆಯಲ್ಲೇ ಅವನ್ನ ಬಿಟ್ರೆ ಯಾರಿಲ್ಲ ಅನ್ನುವಂಥ ಕಾರಣಿಕ ದುಗ್ಗಜ್ಜ. ದುಗ್ಗಜ್ಜ ಮತ್ತು ಗಣಪಯ್ಯನಿಗೆ ದೈವದ ಕಾರಣಿಕೆ ಹೆಮ್ಮೆಯ/ಗೌರವದ ವಿಷಯವಾದರೆ ನಾಗಿಗೆ ಬೇಸರ. ಇದನ್ನು ನಂಬಿ ಇವರು ಬೇರಾವೂ ಕೆಲಸ ಮಾಡುವುದಿಲ್ಲವೆಂದು. ಅವಳಿಗೋ ಜಮೀನು ಕೊಂಡು ಒಕ್ಕಲಗಿತ್ತಿ ಯಾಗುವ ಹಂಬಲ. ಮನೆಯಲ್ಲಿ ಅವಳದೇನೂ ನಡೆಯುದಿಲ್ಲ ವಾದ್ದರಿಂದ ಸುಮ್ಮನಿದ್ದಾಳಷ್ಟೆ. ಬಲು ಜಾಣೆ ನಾಗಿ. ಶ್ರಮಜೀವಿ ಕೂಡ. ಅವಳು ಮಾಡುವ ಬಿದಿರು ಬುಟ್ಟಿಗೆ ಏನು ಬೇಡಿಕೆ ಅಂತಿರಿ, ಇಲ್ಲಿವರಗೆ ಯಾವ ಮೀನು ಅದರಿಂದ ತಪ್ಪಿಸಿಕೊಳ್ಳುವ ಸಾಹಸ ಮಾಡಿಲ್ಲವೆಂಬುದೇನು ಸಣ್ಣ ವಿಚಾರವೇ ?

ಹೀಗಿರುವಾಗ ಅವರರೂರಿನ ಹತ್ತಿರ ಸರಕಾರದಿಂದ ಡ್ಯಾಮ್ ಕಟ್ಟಲ್ಪಟ್ಟು ಅದರ ಹಿನ್ನೀರಿನಲ್ಲಿ ಮುಳುಗುವ ಎಲ್ಲಾ ಗ್ರಾಮಗಳಿಗೂ  ಪರಿಹಾರ ಸಿಗುವಂತೆ ಇವರೂರವರಿಗೂ ಪರಿಹಾರ ಸಿಗುತ್ತದೆ. 

ಇವರಿರುವ ಚಿಕ್ಕ ಮನೆಗೆ ಅದೇನು ಪರಿಹಾರ ಸಿಕ್ಕೀತು. ಪರಿಹಾರ  ಮನೆಗೆ  ಕೊಟ್ಟರಾಯಿತೇ..? ನಮಗೆ ಸೇರಿದ ಗುಡಿಗೆ .? ಅದರ ಸುತ್ತಿನ ಜಾಗಕ್ಕೆ, ನಮ್ಮ ಕಾರಣಿಕೆಗೆ, ಮರ್ಯಾದೆ ಗೌರವಕ್ಕೇನು ಪರಿಹಾರ..?  ಅದೆಲ್ಲದ್ದಕ್ಕೂ ಸಿಗಬೇಕಲ್ಲವೆ ಕೇಳುತ್ತಾನೆ ದುಗ್ಗಜ್ಜ. 
ಗುಡಿ ನಿಮ್ಮದೆನ್ನುವುದಕ್ಕೆ ಎಲ್ಲಿದೆ ದಾಖಲೆ..? ಕೇಳುತ್ತದೆ ಸರಕಾರ
ಸುತ್ತ ಊರವರ ಕೇಳಿ  ಬೇಕಾದರೆ. ನಾವೇ ಅಲ್ವ ಅದನ್ನ ಕಾಯ್ಕಂಡ್ ಬಂದಿದ್ದು, ಜನರ ಕಷ್ಟ-ಸುಖಕ್ಕಾದದ್ದು.  ನಿಮ್ಮ ಅಳತೇಗೋಲಲ್ಲಿ ಅಳೆಯಬೇಡಿ  ನಾವು ಹೇಗೆ ಬದುಕಿದ್ದೆವೋ ಅದಕ್ಕೆ ತಕ್ಕ ಹಾಗೆ ನಮ್ಮ ಅಳತೆಗೋಲಂತೆ ಕೊಡಿ ಪರಿಹಾರ ಎನ್ನುತ್ತಾನೆ ದುಗ್ಗಜ್ಜ
ದಾಖಲೆಯ ಪ್ರಕಾರ ಇದು ನಿನ್ನದಲ್ಲ. ಸಾರ್ವಜನಿಕ ಸ್ವತ್ತು. ಅಂದರೆ ನನ್ನ ಸ್ವತ್ತು ಹೇಳುತ್ತದೆ ಸರಕಾರ.
ಮತ್ತೆ ನಮ್ಮ ಮರ್ಯಾದೆ ಗೌರವಕ್ಕೆ ಸಿಗುವ ಪರಿಹಾರವೇನು ಕೇಳುತ್ತಾನೆ ದುಗ್ಗಜ್ಜ
ಇದಕ್ಕೆಲ್ಲ ನನ್ನಲ್ಲಿ ಉತ್ತರವಿಲ್ಲ ಹೇಳುತ್ತದೆ ಸರಕಾರ.
ಇದೊಂದು ಡ್ಯಾಮ್ ನಿಂದ ಎಷ್ಟು ಜನಕ್ಕೆ ಉಪಕಾರವಾಗುತ್ತದೆ ಗೊತ್ತಿದೆಯೇ..? ಕೇಳುತ್ತದೆ ಸರಕಾರ. 
ಒಬ್ಬರನ್ನು ಮುಳುಗಿಸಿ ಇನ್ನೊಬ್ಬರ ಮೇಲೆತ್ತುವುದಾವ ನ್ಯಾಯ ಕೇಳುತ್ತಾನೆ ದುಗ್ಗಜ್ಜ. ಆಯಿತು ನಿಮ್ಮ ಪರಿಹಾರ ಬೇಡವೆ ಬೇಡ ನನಗೆ. ನಮ್ಮೂರಲ್ಲಿ  ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಕೇಳುತ್ತಾನೆ ದುಗ್ಗಜ್ಜ.
ಡ್ಯಾಮ್ ನ ಹಿನ್ನೀರಲ್ಲಿ ಮುಳುಗಿ ಸಾಯುವೆ ಎನ್ನುತ್ತೆ ಸರಕಾರ
ರಾಮ- ಸೀತೆ ವನವಾಸ ಮಾಡಿದ ಜಾಗ ಅದ್ಹೇಗೆ ಮುಳುಗತ್ತೆ ಎನ್ನುತ್ತಾನೆ ಮುಗ್ಧ ದುಗ್ಗಜ್ಜದ್ವೀಪ ಚಿತ್ರದ ಮುಖ್ಯ ಎಳೆ ಇದೇ ಆದರೂ ಕಥೆ ಬೆಳೆಯುತ್ತ ಬೆಳೆಯುತ್ತ ಹೊಸ ಹೊಸ ಆಯಾಮ ಪಡೆಯುತ್ತಾ ಸಾಗುತ್ತದೆ.

ಕೊನೆಗೆ ದುಗ್ಗಜ್ಜ ಸಿಕ್ಕ ಪರಿಹಾರವನ್ನು ತಿರಸ್ಕರಿಸಿ ಅಲ್ಲೇ ಉಳಿಯುವ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇತ್ತ ಊರವರೆಲ್ಲ ಒಬ್ಬೊಬ್ಬರಾಗಿ ತಮಗೆ ಸಿಕ್ಕ ಪರಿಹಾರದೊಂದಿಗೆ ಊರು ಬಿಡತೊಡಗುತ್ತಾರೆ. ಮಳೆಗಾಲ ಶುರುವಾಗಿ, ಮಳೆ ಜೋರಾಗಿ ನೀರು ಏರಲು ಶುರುವಾಗುತ್ತದೆ. ಪೊಲೀಸರು ಬಂದು ದುಗ್ಗಜ್ಜ ಮತ್ತವನ ಕುಟುಂಬವನ್ನು ಬಲಾತ್ಕಾರವಾಗಿ ಹೊರಹಾಕುತ್ತಾರೆ. ಪಟ್ಟಣದಲ್ಲಿರುವ ತಮ್ಮ ನೆಂಟರ ಮನೆಗೆ ಬರುವ ದುಗ್ಗಜ್ಜ ಎಲ್ಲ ಕಳೆದುಕೊಂಡವರಂತಾಗಿ ಅನ್ಯ ಮನಸ್ಕನಾಗಿ ಕುಳಿತುಕೊಳ್ಳುತ್ತಾನೆ. ಆ ಹಿರಿಯ ಜೀವಕ್ಕೆಹುಟ್ಟಿ ಬೆಳೆದ ಆ ಮನೆ, ಆ ಜಾಗ, ಗುಡಿ, ಕಾಡು, ಮಳೆ ಇಲ್ಲದೆ ಇರುವುದಕ್ಕೆಆಗುವುದಿಲ್ಲ. ಇಲ್ಲಿರುವುದಕ್ಕೆ ಸಾಧ್ಯವೇ ಇಲ್ಲ ಸತ್ತರೆ ಅಲ್ಲೇ ಸಾಯುವುದೆಂದು ನಿರ್ಧರಿಸಿ ಯಾರಿಗೂ ಹೇಳದೆ  ಕೇಳದೆ ಹೊರಟುಬಿಡುತ್ತಾನೆ. ಬೇರೆ  ಯಾವ ದಾರಿಯೂ ಇಲ್ಲದೆ ಮಗ ಮತ್ತು ಸೊಸೆ ಅವನನ್ನು ಹಿಂಬಾಲಿಸುತ್ತಾರೆ. ಅವರ ಜೊತೆ ಕೃಷ್ಣ ಬರುತ್ತಾನೆ ಅಪತ್ದ್ಬಾಂಧವನಂತೆ. ಸದಾ ನಗುವ, ಬಾಯಿ ತುಂಬಾ ಮಾತಿನ, ಕನಸುಗಾರ ಕುಶಾಲಿ ಹುಡುಗ ಕೃಷ್ಣ ಇವರ ನೆಂಟರ ಪೈಕಿ. ಮುಂಬೈನಲ್ಲಿ ವ್ಯಾಪಾರವೋ, ಇನ್ನೊಂದೋ ಮಾಡಲು ಹೋಗಿ ಬರಕತ್ತಾಗದೆ ವಾಪಸ್ಸು ಬಂದವ.  

ಒಂದಾದ ಮೇಲೊಂದರಂತೆ ಶುರುವಾಗುವ ಮಳೆ ಜೋರಾಗುತ್ತದೆ. ಒಂದಿನ ಇವರ ಮನೆ ಹೊಸ್ತಿಲಿಗೆ ಬರುತ್ತದೆ ನೀರು. ಬೇರೆ ಉಪಾಯಗಾಣದೇ ಅವರ ಮನೆಗಿಂತ ಎತ್ತರವಾಗಿರುವ ಹೇರಂಬ ಹೆಗ್ಗಡೆಯವರ ಮನೆ ಸೇರುತ್ತದೆ ಕುಟುಂಬ. ಸೀತಾ ಪರ್ವತ ಅರ್ಧ ಮುಳುಗೆ ಹೋಗುತ್ತದೆ. ಸೀತಾ ಪರ್ವತ ಮುಳುಗಲು ಸಾಧ್ಯವೇ ಇಲ್ಲ ಎನ್ನುವ ದುಗ್ಗಜ್ಜನ ಗಟ್ಟಿ ನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಾಗ ಧೃತಿಗೆಡುತ್ತಾನೆ. ತಾನು ನಂಬಿದ ದೈವ ಕೈ ಕೊಟ್ಟಿತಲ್ಲ ಏನಿದೆಂದು ಕಂಗಾಲಾಗಿ, ದೈವಕ್ಕೆ ಪ್ರಶ್ನೆ ಹಾಕಲು ಹೋಗಿ ಅಲ್ಲೇ ಮುಳುಗಿ ಸಾಯುತ್ತಾನೆ ದುಗ್ಗಜ್ಜ. ಇವರ ಮನೆಗೆ ಸೇರುವ ರಸ್ತೆ ನೀರಲ್ಲಿ ಮುಳುಗಿ, ಇವರು ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಂಡು ದ್ವೀಪದ ಪಾಲಾಗುತ್ತಾರೆ.

ಉಳಿಯುವವರು ಮೂರು ಜನ, ಕಾರಣಾಂತರಗಳಿಂದ ಈ ಮೂವರ ನಡುವೆ ಅಪನಂಬಿಕೆ ಬೆಳೆಯುತ್ತದೆ. ಗಣಪಯ್ಯನಿಗೆ ನಾಗಿಯ ಮೇಲೆ ಸಂಶಯ. ಕೃಷ್ಣಾ ನ ಮೇಲೆ ಅಸೂಯೆ, ಬೇಸರ. ಕೃಷ್ಣನಿಗೂ ಇವರಿಬ್ಬರ ಮೇಲೆ ಅಪನಂಬಿಕೆ.ಇವರಿಬ್ಬರ ನಡವಳಿಕೆಯಿಂದ ರೋಸಿ ಹೋಗಿ ನಾಗಿ ಕೃಷ್ಣನನ್ನು ವಾಪಸ್ಸು ಕಳಿಸುತ್ತಾಳೆ. ಇವರ ಬಗ್ಗೆ ಕಿಂಚಿತ್ತೂ ಯೋಚಿಸದ ಕೃಷ್ಣ  ಆ ದ್ವೀಪದಿಂದ ಇರುವ ಒಂದೇ ದೋಣಿಯನ್ನು ತೆಗೆದುಕೊಂಡು ಹೋಗಿ  ಬೇರೆ ಯಾವುದೂ ಆಸರೆಯೇ ಇಲ್ಲದ ಹಾಗೆ ಮಾಡಿ ಹೊರಟುಹೋಗುತ್ತಾನೆ. ಈಗ ಇಡೀ ಸೀತಾ ಪರ್ವತದಲ್ಲಿ ಇವರಿಬ್ಬರೆ. ಸತ್ತರೂ ಯಾರು ನೊಡೋರಿಲ್ಲ. 

 ಈ ನಡುವೆ ಸೀತಾ ಪರ್ವತದಲ್ಲಿ ಹುಲಿಯೊಂದು ಬಂದು ಸೇರಿಕೊಂಡಿದೆ ಮತ್ತಿವರ ಹಸುವನ್ನು ಕೊಂದು ತಿಂದಿದೆ. ಮಳೆ ಹಗಲು ರಾತ್ರಿ ಎನ್ನದೆ ಎಡೆಬಿಡದೆ ಸುರಿಯುತ್ತಿದೆ. ಎಲ್ಲೆಲ್ಲು ನೀರು ಭರಭರನೆ ಏರುತ್ತಿದೆ. ಆ ರಾತ್ರಿ ಹುಲಿಯ  ಗರ್ಜನೆ ಮೇಲಿಂದ ಮೇಲೆ ಕೇಳಿಬರುತ್ತಿದೆ. ಹುಲಿಗೆ ಹಸಿವಾಗಿ ಮನೆಗೆ ಯಾವಾಗ ನುಗ್ಗುತ್ತದೋ ಗೊತ್ತಿಲ್ಲ. ಗಣಪಯ್ಯನೋ ಸೋತು ಹೋದವನಂತೆ ಸಾವು ಎದುರು ನೋಡುತ್ತ ಸುಮ್ಮನೆ ಮಲಗಿ ನಿದ್ರಿಸುವಂತೆ ನಟಿಸುತ್ತಾನೆ.  ಇದೆಲ್ಲದರ ನಡುವೆ ಎಡೆಬಿಡದೇ ಸುರಿಯುವ ಮಳೆಯಲ್ಲಿ ಏಕಾಂಗಿಯಾಗಿ ಹೊರಾಡುವ ನಾಗಿ, ಮುರಿದ ಚಪ್ಪರದಿಂದ ಕರುವನ್ನು ರಕ್ಷಿಸಿ, ಅದನ್ನು ತಂದು ಮನೆಯಲ್ಲಿ ಕಟ್ಟಿ, ಮುರಿದ ಕಿಟಕಿ ಬಾಗಿಲುಗಳನ್ನು ಭದ್ರ ಮಾಡಿ, ಮನೆ ಸುತ್ತ ಹುಲಿ ಸುಳಿಯದಂತೆ ಬೆಂಕಿ ಮಾಡಿ, ರಾತ್ರಿಯಿಡಿ ನಗಾರಿಯಂಥ ವಾದ್ಯವನ್ನು ಜೋರಾಗಿ ಬಡಿಯುತ್ತ, ಸದ್ದು ಮಾಡುತ್ತ ಕಳೆಯುತ್ತಾಳೆ.

ಕಗ್ಗತ್ತಲ ರಾತ್ರಿ ಕಳೆದು ಬೆಳಗಾಗುವಂತೆ, ಡ್ಯಾಮ್ ತುಂಬಿ ಹರಿಯಲು ಶುರುವಾಗತ್ತೆ. ಅಂದರೆ, ಇನ್ನು ಮೇಲೆ ನೀರು ಏರುವುದಿಲ್ಲವೆಂದಲ್ಲವೆ. ಅಂದರೆ ಜೀವದಾಸೆ ಬಿಟ್ಟವರು ಬಚಾವ್. ನಾಗಿ ಹಿರಿ ಹಿರಿ ಹಿಗ್ಗಿ ಗಂಡನನ್ನು ಕರೆದು ತುಂಬಿ ಹರಿಯುವ ಡ್ಯಾಮ್ ನ್ನು ತೋರಿಸಿ ಕುಣಿಯುತ್ತಾಳೆ.  ನಮ್ಮ ದೈವ ನಮ್ಮ ಕೈ ಬಿಡಲಿಲ್ಲ ಎನ್ನುತ್ತಾನೆ ಗಣಪಯ್ಯ. ರಾತ್ರಿಯಿಡಿ ಹೋರಾಡಿ ತನ್ನದೆಲ್ಲವ ಉಳಿಸಿಕೊಳ್ಳಲು ಹೆಣಗಾಡುವ ನಾಗಿಗೆ ದಿಗ್ಭ್ರಾಂತಿ. ನಮ್ಮ ಸಂಸಾರ ಒಡೆಯದ ಹಾಗೆ ನೋಡಿಕೊಂಡವರಾರು.. ? ರಾತ್ರಿಯಿಡೀ ಮನೆಗೆ ಹುಲಿ ನುಗ್ಗದಂತೆ ನೋಡಿಕೊಂಡವರಾರು..? ನಿನಗೆ ಇಲ್ಲಿವರಗೆ ತಂದವರಾರು..? ಎನ್ನ್ನತ್ತಾಳೆ ನಾಗಿ.       ನಾವೇನಿದ್ರು  ಬರಿ ನಿಮಿತ್ತ ಕಣೆ, ಎಲ್ಲ ದೈವೇಚ್ಛೆ ಎಂದು ತುಂಬಾ ಸುಲಭವಾಗಿ ಕೈ ತೊಳೆದುಕೊಳ್ಳುತ್ತಾನೆ  ಗಣಪಯ್ಯ.

ಹಿಂದಣ ಕೆರೆ  ಮುಂದಣ ಬಲೆ
ಹದುಳವಿನ್ನೆಲ್ಲಿಯದು ಹೇಳಾ
ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ (a body beyond seeking, a bliss beyond mating)
ಎನಗೆ ನೀ ಕರುಣಿಸು ಚೆನ್ನಮಲ್ಲಿಕಾರ್ಜುನ. (ಅಕ್ಕ ಮಹಾದೇವಿ)
ನಾಗಿ ಇಂಥ ಮನಸ್ಥಿತಿಯಲ್ಲಿ ಕುಸಿದು ಕೂಡುತ್ತ ಚಿತ್ರ ಮುಗಿಯತ್ತೆ. 

ದ್ವೀಪ ನಮ್ಮೆದುರು ಮೂರು ತರದ ಜನರನ್ನು ತಂದು ನಿಲ್ಲಿಸುತ್ತೆ.
ಭೂತ, ದೈವಗಳಲ್ಲಿ  ನಂಬಿಕೆಯಿಟ್ಟು ಸಮಸ್ಯೆಯನ್ನು ಎದುರಿಸಲಾಗದೆ ಸೋಲುವ ದುಗ್ಗಜ್ಜ ಮತ್ತವನ ಮಗ ಒಂದು ತರವಾದರೆ,  ಎತ್ತಲಾರದಂಥ ಮಾತುಗಳನ್ನಾಡುತ್ತ, ಕನಸು ಕಾಣುವ ಮತ್ತು ಕಾಣಿಸುವ ಕೃಷ್ಣ, ವಿಪತ್ತಿನಿಂದ ಪಾರು ಮಾಡಲು ಬಂದ ಆಪದ್ಬಾಂಧವನಂತೆ ಕಂಡರೂ, ಅದನ್ನು ಕಂಡು ತಾನೇ ಮೊದಲು ಪರಾರಿಯಾಗುತ್ತಾನೆ. 
ಅಲ್ಲೇ  ನಿಂತು ಎಲ್ಲವನ್ನು ಎದುರಿಸುವ ನಾಗಿ ಎಲ್ಲರನ್ನು ಮೀರಿಸಿ ನಿಲ್ಲುತ್ತಾಳೆ, ವರ್ತಮಾನದಲ್ಲಿ ನಂಬಿಕೆಯಿಟ್ಟು ಬಂದದ್ದು  ಬಂದಂತೆ ಎದರಿಸುತ್ತ ಸಾಗುತ್ತಾಳೆ.  ಎಂಥ ಪರಿಸ್ಥಿತಿಯಲ್ಲೂ ಹೆದರದೇ, ಕೈಕಟ್ಟಿ ಕೂರದೇ, ಹೀಗಾಯಿತಲ್ಲ.. ಎಂದು ತಲೆ ಮೇಲೆ ಕೈ ಹೊತ್ತು ಕೂರದೇ  ತನ್ನಿಂದ ಸಾಧ್ಯವಾದದನ್ನ ಮಾಡುತ್ತ ಮುಂದೆ ಮುಂದೆ ಸಾಗುವ ನಾಗಿಯಲ್ಲಿ ಜೀವನ ಪ್ರೀತಿ ಮತ್ತು ಹೋರಾಟದ ಭಾವನೆ ತೋರುತ್ತದೆ.

ಕತೆ ಸಾಗಿದಂತೆ ಪ್ರತಿಯೊಂದು ಪಾತ್ರವು ತನ್ನ-ತನ್ನ ನಂಬಿಕೆಯನ್ನು ಕಳೆದುಕೊಳ್ಳುತ್ತ ಹೊರಜಗತ್ತಿನಿಂದ ದೂರವಾಗಿ ದ್ವೀಪವಾಗುತ್ತ   ಸಾಗುತ್ತದೆಂಬುದು ಕತೆ/ಚಿತ್ರದ ಇನ್ನೊಂದು ಆಯಾಮ. 

"ಈ ಸೀತಾ ಪರ್ವತ, ದೇವರ ಕಾಡು ಇದಕ್ಕೆಲ್ಲ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂದ್ರಂತಲ್ಲ ನಿಮ್ಮಾಪಿಸಲ್ಲಿ, ಅದಕ್ಕೆ ನಿನ್ನೀ ತಗಡಿನ  ಕೊಳವೇಲಿ ಏನಾದ್ರು ಮಿಸ್ಟೇಕ್ ಇದೆಯಾ ಕಾಂಬ ಅಂತ ಬಂದೆ" ಎನ್ನುವ ದುಗ್ಗಜ್ಜನ ಪಾತ್ರ ಮಾಡಿದ ಎಮ್. ವಾಸುದೇವ ರಾವ್ ಚೋಮನ ದುಡಿಗೆ ನಟನೆಯಲ್ಲಿ ಸ್ವರ್ಣ ಕಮಲ ಪಡೆದವರು.
ಟೆಮೆಶ್ಟಾತು ಸಣ್ಣಯ್ಯ . ? "ಊರ್ ಬಿಡು ಹೊತ್ತಾತ್"...ಎನ್ನುವ ಮಕ್ಕಳು
"ಹ್ಯಾಂಗೂ ನಾವು ಅಂದುಕೊಂಡಿದ್ದು ಆಗುದಿಲ್ಲ, ಆಗೋದ್ರಲ್ಲೇ ಕನಸು ಕಾಣ್ಕೊಂಡು ಬದುಕಿರೋದು" ಎಂದು ಪ್ಯಾಲಿ ನಗು ನಗುವ  ನಾಗಿ.   
"ಊರು ಮುಳುಗೋ ಟೈಮಲ್ಲಿ ಅಡಕೆ ತೋಟದ ಒಡೆಯರಾಗೋ ಯೋಗ ಬಂತು ಕಾಣಿ" ಎಂದು ನಗುವ ಗಣಪಯ್ಯ. 
"ಖಾಲಿ ಮನೇಲಿ ಜೋರಾಗಿ ಕೂಗೋದು ಎಂಥ ಮಜಾ ಅಲ್ವ" ಎನ್ನುವ ಕೃಷ್ಣ. ಇವೆಲ್ಲ ಕೆಲವೊಂದು ಚಂದದ ಸಂಭಾಷಣೆಗಳು. 

ಛಾಯಾಗ್ರಹಣ ಕಣ್ಣಿಗೆ ಹಬ್ಬ, ರಾಷ್ಟ ಪ್ರಶಸ್ತಿ ಸಿಕ್ಕಿದೆ. ಮಳೆ, ನದಿ , ತೊರೆ, ಕಾಡು ಇತ್ಯಾದಿ  ಮಲೆನಾಡ ಸೊಬಗನ್ನು ತುಂಬಾ  ಚಂದವಾಗಿ ಸೆರೆಹಿಡಿಯಲ್ಪಟ್ಟಿದೆ.  ಅದ್ಭುತವಾಗಿ ಮೂಡಿ  ಬಂದಿರುವ  ಹಿನ್ನೆಲೆ ಸಂಗೀತ ಅಲೆ-ಅಲೆಯಾಗಿ ತಣ್ಣಗೆ ಬಂದು ತಾಗುತ್ತದೆ. ಎರಡು ಟ್ಯೂನ್ ಗಳು ಮತ್ತೆ ಮತ್ತೆ ನೆನಪು ಬಂದಾವು.    
ಗಿರೀಶರ ಬಗ್ಗೆ ಹೇಳಲು ಹೋದರೆ ಅದೇ ಒಂದು  ಲೇಖನವಾದೀತು. ಕತೆಯೇ ಇರದೇ ಬರೀ ಮಸಾಲೆ ನೆಚ್ಚಿಕೊಂಡು ಸಿನಿಮಾ ಮಾಡುವ ಜನರ ನಡುವೆ,  ಕತೆಯನ್ನು ಬೆಳೆಸಿ ಹೊಸ ಹೊಸ ಆಯಾಮಗಳನ್ನು ಹುಡುಕುವ ಗಿರೀಶರು ಅತ್ಯಂತ ಭಿನ್ನರು. ಸರಳ ಸ್ವಭಾವದವರು.  ಸನ್ನಿವೇಶಕ್ಕೆ ತಕ್ಕಂತೆ ರೂಪಾಲಂಕಾರಗಳನ್ನು (metaphor) ಬಳಸುವ ಕ್ರಮ ಅವರ ದೀರ್ಘ ಸಂಶೋಧನೆಯ / ಅನುಭವದ ಫಲವಿದ್ದೀತು.


-
ಸಮಚಿತ್ತ

                                                                                                                   

No comments:

Post a Comment